ಸೋಮವಾರ, ನವೆಂಬರ್ 05, 2012

ಜಪಾನಿನಲ್ಲಿ ಕಸ ವಿಲೇವಾರಿ

ಕಸ ಅನ್ನೋದು ಎಷ್ಟು ಸಮಸ್ಯೆ ಆಗಿದೆ ಅಲ್ವಾ. ಬೆಂಗಳೂರಿನಲ್ಲಿ ಎಲ್ಲಿ ಅಂದರಲ್ಲಿ ಕಸ. ನಗರದಲ್ಲಿ ಡೆಂಘೀ, ಮಲೇರಿಯಾ, ಹಕ್ಕಿಜ್ವರದಂತಹ ಮಾರಣಾಂತಿಕ ಕಾಯಿಲೆಗಳು ಉಲ್ಬಣಗೊಂಡಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮತ್ತಷ್ಟು ಸಾಂಕ್ರಾಮಿಕ ರೋಗಗಳು ಸೃಷ್ಟಿಯಾಗುವ ಸಾಧ್ಯತೆಗಳಿವೆ. ನಗರದ ಕೆಲವು ಪ್ರದೇಶಗಳಲ್ಲಿ ಜ್ವರ ಪ್ರಕರಣಗಳು ಹೆಚ್ಚುತ್ತಿದೆ, ಆದರು ಕೂಡ ನಮ್ಮ ಜನ ತಲೆ ಕೆಡಿಸಿಕೊಳ್ಳದೆ ಆರಾಮ ಆಗಿ ಇರ್ತಾರೆ. ಕಸದಿಂದ ಸಾಕಷ್ಟು ಪಾಠ ಕಲಿತಿರುವ ಬಿಬಿಎಂಪಿ, ಕಡೆಗೂ ಕಸದಿಂದ ರಸ ಉತ್ಪಾದಿಸಬಹುದೆಂಬ ಕಟುಸತ್ಯಕ್ಕೆ ಜೋತುಬಿದ್ದಿದ್ದು, ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವಸಲುವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತಿದ್ದಾರೆ. ಬೆಂಗಳೂರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ತ್ಯಾಜ್ಯವಿಲೇವಾರಿ ಒಂದು ಗಂಭೀರ ಸಮಸ್ಯೆಯಾಗಿದ್ದು, ಸ್ವಚ್ಛ ಬೆಂಗಳೂರು ನಿರ್ಮಾಣಕ್ಕೆ ಇದು ಅಡ್ಡಿಯಾಗಿದೆ. ದಿನಂಪ್ರತಿ ಈ ಊರಲ್ಲಿ ಉತ್ಪತ್ತಿಯಾಗುವ 30,000 ಟನ್‌ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಒಂದು ದೊಡ್ಡ ಸವಾಲು. BBMP ಮತ್ತು ಸರ್ಕಾರ, ತ್ಯಾಜ್ಯ ವಿಲೇವಾರಿಗಾಗಿ ಕೋಟ್ಯಾಂತರ ರೂಪಾಯಿ ಹಣ ಚೆಲ್ಲುತ್ತಿದೆ. ಖಾಸಗೀ ಗುತ್ತಿಗೆದಾರರ ಸಹಾಯದೊಂದಿಗೆ ಅದೇನೇನೋ ಸರ್ಕಸ್‌ ಮಾಡುತ್ತಿದೆ. ಆದರು ಅಷ್ಟೊಂದು ಯಶಸ್ಸು ಕಂಡುಬರುತ್ತಿಲ್ಲ. ನಮ್ಮ ಬೆಂಗಳೂರಿನ ಈ ಸಮಸ್ಯೆಯ ಬಗ್ಗೆ ವಾರ್ತೆಗಳಲ್ಲಿ ನೋಡಿ ನೋಡಿ ನನಗೆ ಜಪಾನಿನಲ್ಲಿ ಕಸ ವಿಲೇವಾರಿ ಹೇಗೆ ಮಾಡುತ್ತಾರೆ ಮತ್ತು ಇಲ್ಲಿನ ಸ್ವಚ್ಚತೆಯ ಬಗ್ಗೆ ಬರೆಯಬೇಕೆನ್ನಿಸಿತು. 

ಜಪಾನ ಸ್ವಚ್ಚತೆಗೆ ಎಷ್ಟು ವರ್ಣಿಸಿ ಹೇಳಿದರು ಸಾಲದು. ಇಲ್ಲಿಯ ಜನರು ತುಂಬಾ ದೇಶಾಭಿಮಾನ ಹೊಂದಿದ್ದಾರೆ. ಪ್ರತಿಯೊಬ್ಬ ಸಾಮಾನ್ಯನು ಕಾನೂನಿನ ನಿಯಮಗಳನ್ನು ನಿಷ್ಟೆಯಿಂದ ಪಾಲಿಸುತ್ತಾನೆ. ಜಪಾನಿನಲ್ಲಿ ಮುಕ್ಯವಾಗಿ ಕಂಡುಬರುವುದೆನೆಂದರೆ ಸಾರ್ವಜನಿಕ ಸ್ಥಳಗಳಲ್ಲಿ ಎರಡು ವಿದವಾದ ಕಸದ ಡಬ್ಬೆಗಳನ್ನು ಇಟ್ಟಿರುತ್ತಾರೆ. ಒಂದು ಸಾಮಾನ್ಯ ಕಸವನ್ನು ಹಾಕಲು, ಮತ್ತೊಂದು ಮರುಬಳಕೆ ಮಾಡುವ ವಸ್ತುಗಳು ಹಾಕಲು, ಉದಾ: ಬಾಟಲಿಗಳು, ಪ್ಲಾಸ್ಟಿಕ್, ಗಾಜು, ಲೋಹದವಸ್ತುಗಳು. ಪ್ರತಿ ಮನೆಲಿ ಕೂಡ ಇದೆ ರೀತಿ ಬೇರೆ ಬೇರೆಯಾಗಿ ವಿಂಗಡಿಸಿ ಇಡಲಾಗುವದು. ನಿಗದಿಪಡಿಸಿದ ದಿನದಂದು, ದಿನದ ಕಸ ಮತ್ತು ಮರುಬಳಕೆ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತದೆ. ವೇಳೆಗೆ ಸರಿಯಾಗಿ ಪಾಲಿಕೆಯ ಪೌರ ಕಾರ್ಮಿಕರು ಬಂದು ಕಸವನ್ನು ತೆಗೆದುಕೊಂಡು ಹೋಗುವರು. ವಿಷಕಾರಿ ಮತ್ತು ಅಪಾಯಕಾರಿ ವಸ್ತುಗಳನ್ನು ಕೂಡ ಪ್ರತ್ಯೇಕವಾಗಿ ವಿಲೇವಾರಿ ಮಾಡಲಾಗುವದು.

ನಮ್ಮ Kitakyushu ನಗರದಲ್ಲಿ ಕಸವನ್ನು 4 ರೀತಿಯಲ್ಲಿ ವಿಂಗಡಿಸಿ ಸಂಗ್ರಹಿಸಲಾಗುತ್ತದೆ (ದಿನದ ತ್ಯಾಜ್ಯ, ಕ್ಯಾನ್/ಗ್ಲಾಸ್ ಬಾಟಲಿಗಳು, ಮರುಬಳಕೆ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಪ್ಲಾಸ್ಟಿಕ್ ವಸ್ತುಗಳು). ಕಸ ಹಾಕಲು 4 ಬಣ್ಣದ ಪ್ಲಾಸ್ಟಿಕ್ ಚೀಲಗಳು ಇರುತ್ತವೆ. ಅವುಗಳನ್ನು ನಾವು ಅಂಗಡಿಗಳಲ್ಲಿ ಕರಿದಿಸಬೇಕು. ನೀಲಿ ಬಣ್ಣದ ಚೀಲದಲ್ಲಿ ದಿನದ ತ್ಯಾಜ್ಯ, ಕಂದು ಬಣ್ಣದ ಚೀಲದಲ್ಲಿ ಕ್ಯಾನ್/ಗ್ಲಾಸ್ ಬಾಟಲಿಗಳು, ಕೇಸರಿ ಬಣ್ಣದ ಚೀಲದಲ್ಲಿ ಮರುಬಳಕೆ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಇತರೆ ಪ್ಲಾಸ್ಟಿಕ್ ವಸ್ತುಗಳು ಹಸಿರು ಬಣ್ಣದ ಚೀಲದಲ್ಲಿ ಹಾಕಬೇಕು.



ದಿನನಿತ್ಯದ ಕಸವನ್ನು ವಾರದಲ್ಲಿ ಎರಡು ಬಾರಿ ಸಂಗ್ರಹಿಸುತ್ತಾರೆ (ಸೋಮವಾರ ಮತ್ತು ಗುರುವಾರ) ಮತ್ತು ಉಳಿದವುಗಳನ್ನು ವಾರದಲ್ಲಿ ಒಂದು ಬಾರಿ ಸಂಗ್ರಹಿಸುತ್ತಾರೆ (ಶುಕ್ರವಾರ). ಕಸವನ್ನು ಸರಿಯಾಗಿ ಕಟ್ಟಿ ನಿಗದಿಪಡಿಸಿದ ಸ್ಥಳದಲ್ಲಿ ಇಟ್ಟುಬರುವುದು. ಅದು ಎರಡು ದಿನ ಮುಂಚಿತವಾಗಿ ಇಟ್ಟರೆ ಅದನ್ನು ತೆಗೆದು ಕೊಳ್ಳುವುದಿಲ್ಲ. ಆ ದಿನದಂದು ಯಾವಕಸ ಸಂಗ್ರಹಿಸುವರೋ ಅದನ್ನು ಮಾತ್ರ ಇಡತಕ್ಕದ್ದು, ಮತ್ತೆ ಎಲ್ಲವನ್ನು ಒಂದೇಚೀಲದಲ್ಲಿ ಹಾಕಿ ಇಟ್ಟರೆ ಅದನ್ನು ಅವರು ಮುಟ್ಟುವದಿಲ್ಲ. ದಿನನಿತ್ಯದ ಕಸ ಎಂದರೆ ದಿನನಿತ್ಯದ ಆಹಾರ ತ್ಯಾಜ್ಯ ಮತ್ತು ಇತರೆ ಕಸ. ಸಂಗ್ರಹಿಸಿದ ತ್ಯಾಜ್ಯವನ್ನು ಹೇಗೆ ವಿವಿದ ರೀತಿಯಲ್ಲಿ ಮರುಬಳಕೆ ಮಾಡುತ್ತಾರೆ ಎಂಬುವುದನ್ನು ಕೆಳಗಿನ ಚಿತ್ರದಲ್ಲಿ ಕಾಣಬಹುದು.


ದಿನನಿತ್ಯದ ಕಸವನ್ನು ಅವರು ರಸ ಗೊಬ್ಬರ ತಯಾರಿಸಲು ಉಪಯೋಗಿಸುತ್ತಾರೆ. ಇದಲ್ಲದೆ, ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ದಿನನಿತ್ಯದ ಕಸವನ್ನು ಹಾಗು ಇತರೆ ತ್ಯಾಜ್ಯವನ್ನು ಸುಟ್ಟು ವಿದ್ಯುತ್ತನ್ನು ಉತ್ಪಾದಿಸುತ್ತಾರೆ ಮತ್ತು ಸುಟ್ಟು ಉಳಿದಂತ ಬೂದಿಇಂದ ರಸ್ತೆ ಮಾಡಲು ಬೇಕಾದ ಮೂಲ ವಸ್ತುಗಳನ್ನು ಮತ್ತು ಇತರೆ ಮರು ಬಳಕೆ ವಸ್ತುಗಳನ್ನು ಮಾಡುತ್ತಾರೆ. ಹಾಗಾಗಿ ಇಲ್ಲಿ ಪ್ರತಿಯೊಂದು ಹಳ್ಳಿಯಿಂದ ಹಿಡಿದು ದೊಡ್ಡ ಪಟ್ಟಣದ ವರೆಗೂ ಬಹಳ ಸ್ವಚ್ಚತೆ ಕಾಣಬಹುದು. ಜನರು ನಡೆದಾಡುವಾಗ, ದಾರಿಲಿ ಏನಾದರು ಕಸ ಬಿದ್ದಿದ್ದರೆ ಅದನ್ನು ಎತ್ತಿ ಕಸದ ತೊಟ್ಟಿಗೆ ಹಾಕುತ್ತಾರೆ. ಅಷ್ಟೊಂದು ಜವಾಬ್ದಾರಿ ಈ ಜಪಾನಿಯರಲ್ಲಿ ಕಂಡುಬರುತ್ತದೆ.




ಸರಕಾರ ಯಾವದೇ ಕಾನೂನು ಜಾರಿಮಡಿದರೂ ನಮ್ಮಲ್ಲಿ ಜನರು ಸರಿಯಾಗಿ ಪಾಲಿಸುವುದಿಲ್ಲ. ಯಾಕೆಂದರೆ ನಮ್ಮ ಜನರಲ್ಲಿ ಭಾವನೆಗಳೇ ಹಾಗಿವೆ. ತಮ್ಮ ಮನೇಲಿರೋ ಕಸ ಹೋದ್ರೆ ಸಾಕು ಏನಾದ್ರು ಮಾಡ್ಕೊಳ್ಳಿ ನಮ್ಮ ಮನೆ ಒಂದು ಸ್ವಚ್ಚವಾಗಿದ್ರೆ ಅಷ್ಟೆ ಸಾಕು ಎನ್ನುವರು. ಸ್ವಚ್ಚತೆಗೆ ಪ್ರತಿಯೊಬ್ಬರ ಪಾತ್ರ ಬಹುಮುಖ್ಯವಾದುದು. ಇದರ ಜ್ಯೋತೆಗೆ ನಮ್ಮ ಸರ್ಕಾರವು ಕೂಡ ಸರಿಯಾದ ಕಸ ವಿಲೇವಾರಿ ಯೋಜನೆಗಳನ್ನು ಕೈಗೊಳ್ಳಲಿ ಮತ್ತು ಆ ಕಸದಿಂದ ರಸವನ್ನು ತೆಗೆಯುವ ಕೆಲಸ ಮಾಡಬೇಕಾಗಿದೆ.

ಸೋಮವಾರ, ಫೆಬ್ರವರಿ 20, 2012

ನಾಗಾಸಾಕಿ Trip

ಡಿಸೆಂಬರ್ 23-2011, ರಂದು ನಾಗಾಸಾಕಿ, ನೋಡಲು ಹೋದೆವು. ಅಂದು ಬೆಳಿಗ್ಗೆ 7-00 ಘಂಟೆಗೆ Orio station ದಿಂದ ರೈಲು. ಅದ್ದರಿಂದ ಸರಿಯಾದ ಸಮಯಕ್ಕೆ ಹೋದೆವು, ಸರಿಯಾದ ಸಮಯಕ್ಕೆ ರೈಲು ಬಂತು ಇಲ್ಲಿ ಸಮಯದ ಶಿಸ್ತಿಗೆ ಬಹಳ ಒತ್ತು ಕೊಡುತ್ತಾರೆ. 7-00 ರ ನಂತರ ಒಂದು ನಿಮಿಷ ಆದರು ನಿಲ್ಲುವದಿಲ್ಲ. ಹಾಗಾಗಿ ಸರಿಯಾಗಿ ರೈಲು ಬಂತು ನಾವು ಮತ್ತು ನಮ್ಮ ಸ್ನಹಿತೆಯ ಕುಟುಂಬ ಒಟ್ಟಿಗೆ ಹೋಗಿದ್ದೆವು.  ಅಂದು ತುಂಬ ಚಳಿ ಸುತ್ತೆಲ್ಲಾ ಮಂಜು ಬಿಳುತಿತ್ತು  ಅದನ್ನು ನೋಡುವುದೇ ಒಂದು ಸಂಭ್ರಮ. ನೋಡನೋಡುತ್ತಲೇ ನಾಗಾಸಾಕಿ ಬಂದೇಬಿಟ್ಟಿತು. ಅಲ್ಲಿಂದ ಮೊದಲು Glover garden ನೋಡಲು ಹೋದೆವು. Thomas Blake Glover ಎಂಬ ಸ್ಕಾಟ್ಲ್ಯಾಂಡ್ ನ ಒಬ್ಬ ವ್ಯಾಪಾರೀ ಈ ಉದ್ಯಾನವನವನ್ನು ನಿರ್ಮಿಸಿದ್ದಾನಂತೆ. ಅದು ಒಂದು ಮೈ ರೋಮಾಂಚನ ಆಗುವ ಸ್ಥಳ. ಬೆಟ್ಟದ ಮೇಲೆ ಅದನ್ನು ಮಾಡಲಾಗಿದ್ದು, ಅಲ್ಲಿ ಹೋಗಿ ನಿಂತರೆಸಾಕು ಕೆಳಗಿನ ಇಡಿ ನಗರವೇ ಸುಂದರವಾಗಿ ಕಾಣುವುದು. ನಂತರ ಒಳಗೆ ಪ್ರವೇಶ ಮಾಡಿದಿವಿ. ಅಲ್ಲಿ ಪ್ರಾಚಿನಕಾಲದ ವಸ್ತುಗಳನ್ನು ಸಂಗ್ರಹಿಸಿಡಲಾಗಿತ್ತು, ಅವುಗಳನ್ನು ನೋಡುತ್ತಲೇ ನನ್ನ ಗಮನ ವಿಶೇಷವಾಗಿ ಪಾಶ್ಚಾತ್ಯ ಉಡುಗೆ ಕಡೆ ಹೋಯಿತು. ಅವುಗಳನ್ನು 500 ಯನ್ ಗೆ 30 ನಿಮಿಷ ಬಾಡಿಗೆಗೆ ಆ ಉಡುಗೆಗಳು ದೊರೆಯುತ್ತಿತ್ತು, ಅದನ್ನು ದರಿಸಿ ಕೆಲವು ಫೋಟೋಗಳನ್ನು ತೆಗೆದುಕೊಂಡು ಸಮಯಮುಗಿಯೋದಕ್ಕೆ ಅವುಗಳನ್ನು ಮರಳಿಸಿದಿವಿ. ಆನಂತರ ಹೊಟ್ಟೆ ತುಂಬಾ ಹಸಿವಾಯಿತು ಎಲ್ಲರೂ ಮನೆಯಿಂದ  ತಂದ ಅಡುಗೆಯನ್ನು ಬಹಳ ಆನಂದದಿಂದ  ಊಟ ಮಾಡಿ, ಸ್ವಲ್ಪ ವಿಶ್ರಾಂತಿ ತೆಗೆದುಕೊಂಡೆವು.

Glover garden 



ನಂತರ Atomic bomb hypo center, Peace Park ಮತ್ತು Atomic bomb museum ನೋಡಲು ಸಾಗಿದೆವು. ನಾವು ಮೊದಲು Hypo Center ಭೇಟಿಕೊಟ್ಟೆವು. ಇದೆ ಜಾಗದಲ್ಲಿ ಅಗಸ್ಟ್ 19, 1945 ರಂದು ಬೆಳಿಗ್ಗೆ 11-02 ಕ್ಕೆ ಅಮರಿಕನ್ನರು ಅಣು ಬಾಂಬ್ ಎಸೆದರು. ಈ ದಾಳಿಯಲ್ಲಿ ೧೫೦, ೦೦೦ ಜನರು ಮರಣಹೊಂದಿದರಂತೆ.

 ಬಾಂಬ್ ಎಸೆದ ಸ್ಥಳ.


Atomic bomb museum ನಲ್ಲಿ, ಅಣುಬಾಂಬ ದಾಳಿಯಿಂದಾದ ಅನಾಹುತಗಳು ಮತ್ತು ಮಹತ್ವದ ಐತಿಹಾಸಿಕ ಘಟನೆಗಳನ್ನು ಒಂದು ಕಥೆಯ ರೂಪದಲ್ಲಿ ತೋರಿಸಲಾಗಿದೆ. ಅಣು ಶಸ್ತ್ರಾಸ್ತ್ರಗಳ ಸಂಶೋಧನೆ ಮತ್ತು ಅಭಿವೃದ್ಧಿಯ ಇತಿಹಾಸದ ನೀರುಪಣೆ, ಅಣುಬಾಂಬ ದಾಳಿಯಾ ನಂತರದ ಕರಾಳ ದೃಶ್ಯಗಳ ಛಾಯಾಚಿತ್ರಗಳು, ಅಳಿದುಳಿದ ಸ್ಮಾರಕಗಳು, ಅವಶೇಷಗಳು, ಅರೆಬರೆ ಬೆಂದ ಸಲಕರಣೆಗಳನ್ನು ಮತ್ತು ಪರಮಾಣು ಬಾಂಬ್ ದಾಳಿಗೆ ಸಂಬಂಧಿಸಿದ ದಾಖಲೆಗಳನ್ನು ಪ್ರದರ್ಶಿಸಲಾಗಿದೆ. ಆ ಘಟನೆಯಲ್ಲಿ ಬದುಕಿ ಉಳಿದಂತ ವ್ಯಕ್ತಿಗಳ ಸಂದರ್ಶನದ ವೀಡಿಯೊಗಳನ್ನು ಕೂಡ ತೋರಿಸಲಾಗಿದೆ. ಸಂದರ್ಶನದಲ್ಲಿ, ಅವರು ತಮ್ಮ ಕುಟುಂಬದಲ್ಲಿರುವವರನ್ನು ಕಳೆದುಕೊಂಡ ದುಃಖವನ್ನು ತೋಡಿಕೊಂಡಿದ್ದಾರೆ. 

ಅರೆಬರೆ ಸುಟ್ಟ ಬಟ್ಟೆಗಳು

ಬಾಂಬ್ ದಾಳಿಯ ನಂತರದ ದೃಶ್ಯ

೧೧.೨ ನಿಮಿಷಕ್ಕೆ ಸರಿಯಾಗಿ ಸ್ಪೋಟವಾದ ಸಮಯವನ್ನು ಈ ಗಡಿಯಾರದಲ್ಲಿ ನೀವು ನೋಡಬಹುದು. 

Peace statue ಮುಂದೆ.

ಈ ಐತಿಹಾಸಿಕ ದುರಂತದ ಎಲ್ಲ ಘಟನೆಗಳನ್ನು ನೋಡಿ ಹೊರಗೆ ಬಂದು ಈಗಿನ ನಗರದ ಅಭಿರುದ್ದಿಯನ್ನು ನೋಡಿದಮೇಲೆ ನನಗೆ ಇದೆ ಸ್ಥಳದಲ್ಲಿ ಈ ಘಟನೆಗಳು ಆಗಿದ್ವಾ ಅಂತ ಅನಿಸುತ್ತದೆ. ಯಾಕಂದ್ರೆ ಆ ಸ್ಥಳವನ್ನು ನಾನು ನಿರೀಕ್ಷೆ ಮಾಡಲು ಸಾದ್ಯವಿಲ್ಲ ಅಷ್ಟೊಂದು ಸುಂದರವಾಗಿ ಬೆಳಿಸಿದ್ದಾರೆ. ಈ ನಗರವು ಆರ್ಥಿಕವಾಗಿಯೂ ಕೂಡ ಮುಂದಿದೆ. ನಿಜವಾಗು ಹೇಳ್ಬೇಕು ಅಂದ್ರೆ ಈದು ಒಂದು ಮಾದರಿಯ ರಾಷ್ಟ್ರ.