ಸೋಮವಾರ, ನವೆಂಬರ್ 05, 2012

ಜಪಾನಿನಲ್ಲಿ ಕಸ ವಿಲೇವಾರಿ

ಕಸ ಅನ್ನೋದು ಎಷ್ಟು ಸಮಸ್ಯೆ ಆಗಿದೆ ಅಲ್ವಾ. ಬೆಂಗಳೂರಿನಲ್ಲಿ ಎಲ್ಲಿ ಅಂದರಲ್ಲಿ ಕಸ. ನಗರದಲ್ಲಿ ಡೆಂಘೀ, ಮಲೇರಿಯಾ, ಹಕ್ಕಿಜ್ವರದಂತಹ ಮಾರಣಾಂತಿಕ ಕಾಯಿಲೆಗಳು ಉಲ್ಬಣಗೊಂಡಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮತ್ತಷ್ಟು ಸಾಂಕ್ರಾಮಿಕ ರೋಗಗಳು ಸೃಷ್ಟಿಯಾಗುವ ಸಾಧ್ಯತೆಗಳಿವೆ. ನಗರದ ಕೆಲವು ಪ್ರದೇಶಗಳಲ್ಲಿ ಜ್ವರ ಪ್ರಕರಣಗಳು ಹೆಚ್ಚುತ್ತಿದೆ, ಆದರು ಕೂಡ ನಮ್ಮ ಜನ ತಲೆ ಕೆಡಿಸಿಕೊಳ್ಳದೆ ಆರಾಮ ಆಗಿ ಇರ್ತಾರೆ. ಕಸದಿಂದ ಸಾಕಷ್ಟು ಪಾಠ ಕಲಿತಿರುವ ಬಿಬಿಎಂಪಿ, ಕಡೆಗೂ ಕಸದಿಂದ ರಸ ಉತ್ಪಾದಿಸಬಹುದೆಂಬ ಕಟುಸತ್ಯಕ್ಕೆ ಜೋತುಬಿದ್ದಿದ್ದು, ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವಸಲುವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತಿದ್ದಾರೆ. ಬೆಂಗಳೂರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ತ್ಯಾಜ್ಯವಿಲೇವಾರಿ ಒಂದು ಗಂಭೀರ ಸಮಸ್ಯೆಯಾಗಿದ್ದು, ಸ್ವಚ್ಛ ಬೆಂಗಳೂರು ನಿರ್ಮಾಣಕ್ಕೆ ಇದು ಅಡ್ಡಿಯಾಗಿದೆ. ದಿನಂಪ್ರತಿ ಈ ಊರಲ್ಲಿ ಉತ್ಪತ್ತಿಯಾಗುವ 30,000 ಟನ್‌ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಒಂದು ದೊಡ್ಡ ಸವಾಲು. BBMP ಮತ್ತು ಸರ್ಕಾರ, ತ್ಯಾಜ್ಯ ವಿಲೇವಾರಿಗಾಗಿ ಕೋಟ್ಯಾಂತರ ರೂಪಾಯಿ ಹಣ ಚೆಲ್ಲುತ್ತಿದೆ. ಖಾಸಗೀ ಗುತ್ತಿಗೆದಾರರ ಸಹಾಯದೊಂದಿಗೆ ಅದೇನೇನೋ ಸರ್ಕಸ್‌ ಮಾಡುತ್ತಿದೆ. ಆದರು ಅಷ್ಟೊಂದು ಯಶಸ್ಸು ಕಂಡುಬರುತ್ತಿಲ್ಲ. ನಮ್ಮ ಬೆಂಗಳೂರಿನ ಈ ಸಮಸ್ಯೆಯ ಬಗ್ಗೆ ವಾರ್ತೆಗಳಲ್ಲಿ ನೋಡಿ ನೋಡಿ ನನಗೆ ಜಪಾನಿನಲ್ಲಿ ಕಸ ವಿಲೇವಾರಿ ಹೇಗೆ ಮಾಡುತ್ತಾರೆ ಮತ್ತು ಇಲ್ಲಿನ ಸ್ವಚ್ಚತೆಯ ಬಗ್ಗೆ ಬರೆಯಬೇಕೆನ್ನಿಸಿತು. 

ಜಪಾನ ಸ್ವಚ್ಚತೆಗೆ ಎಷ್ಟು ವರ್ಣಿಸಿ ಹೇಳಿದರು ಸಾಲದು. ಇಲ್ಲಿಯ ಜನರು ತುಂಬಾ ದೇಶಾಭಿಮಾನ ಹೊಂದಿದ್ದಾರೆ. ಪ್ರತಿಯೊಬ್ಬ ಸಾಮಾನ್ಯನು ಕಾನೂನಿನ ನಿಯಮಗಳನ್ನು ನಿಷ್ಟೆಯಿಂದ ಪಾಲಿಸುತ್ತಾನೆ. ಜಪಾನಿನಲ್ಲಿ ಮುಕ್ಯವಾಗಿ ಕಂಡುಬರುವುದೆನೆಂದರೆ ಸಾರ್ವಜನಿಕ ಸ್ಥಳಗಳಲ್ಲಿ ಎರಡು ವಿದವಾದ ಕಸದ ಡಬ್ಬೆಗಳನ್ನು ಇಟ್ಟಿರುತ್ತಾರೆ. ಒಂದು ಸಾಮಾನ್ಯ ಕಸವನ್ನು ಹಾಕಲು, ಮತ್ತೊಂದು ಮರುಬಳಕೆ ಮಾಡುವ ವಸ್ತುಗಳು ಹಾಕಲು, ಉದಾ: ಬಾಟಲಿಗಳು, ಪ್ಲಾಸ್ಟಿಕ್, ಗಾಜು, ಲೋಹದವಸ್ತುಗಳು. ಪ್ರತಿ ಮನೆಲಿ ಕೂಡ ಇದೆ ರೀತಿ ಬೇರೆ ಬೇರೆಯಾಗಿ ವಿಂಗಡಿಸಿ ಇಡಲಾಗುವದು. ನಿಗದಿಪಡಿಸಿದ ದಿನದಂದು, ದಿನದ ಕಸ ಮತ್ತು ಮರುಬಳಕೆ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತದೆ. ವೇಳೆಗೆ ಸರಿಯಾಗಿ ಪಾಲಿಕೆಯ ಪೌರ ಕಾರ್ಮಿಕರು ಬಂದು ಕಸವನ್ನು ತೆಗೆದುಕೊಂಡು ಹೋಗುವರು. ವಿಷಕಾರಿ ಮತ್ತು ಅಪಾಯಕಾರಿ ವಸ್ತುಗಳನ್ನು ಕೂಡ ಪ್ರತ್ಯೇಕವಾಗಿ ವಿಲೇವಾರಿ ಮಾಡಲಾಗುವದು.

ನಮ್ಮ Kitakyushu ನಗರದಲ್ಲಿ ಕಸವನ್ನು 4 ರೀತಿಯಲ್ಲಿ ವಿಂಗಡಿಸಿ ಸಂಗ್ರಹಿಸಲಾಗುತ್ತದೆ (ದಿನದ ತ್ಯಾಜ್ಯ, ಕ್ಯಾನ್/ಗ್ಲಾಸ್ ಬಾಟಲಿಗಳು, ಮರುಬಳಕೆ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಪ್ಲಾಸ್ಟಿಕ್ ವಸ್ತುಗಳು). ಕಸ ಹಾಕಲು 4 ಬಣ್ಣದ ಪ್ಲಾಸ್ಟಿಕ್ ಚೀಲಗಳು ಇರುತ್ತವೆ. ಅವುಗಳನ್ನು ನಾವು ಅಂಗಡಿಗಳಲ್ಲಿ ಕರಿದಿಸಬೇಕು. ನೀಲಿ ಬಣ್ಣದ ಚೀಲದಲ್ಲಿ ದಿನದ ತ್ಯಾಜ್ಯ, ಕಂದು ಬಣ್ಣದ ಚೀಲದಲ್ಲಿ ಕ್ಯಾನ್/ಗ್ಲಾಸ್ ಬಾಟಲಿಗಳು, ಕೇಸರಿ ಬಣ್ಣದ ಚೀಲದಲ್ಲಿ ಮರುಬಳಕೆ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಇತರೆ ಪ್ಲಾಸ್ಟಿಕ್ ವಸ್ತುಗಳು ಹಸಿರು ಬಣ್ಣದ ಚೀಲದಲ್ಲಿ ಹಾಕಬೇಕು.



ದಿನನಿತ್ಯದ ಕಸವನ್ನು ವಾರದಲ್ಲಿ ಎರಡು ಬಾರಿ ಸಂಗ್ರಹಿಸುತ್ತಾರೆ (ಸೋಮವಾರ ಮತ್ತು ಗುರುವಾರ) ಮತ್ತು ಉಳಿದವುಗಳನ್ನು ವಾರದಲ್ಲಿ ಒಂದು ಬಾರಿ ಸಂಗ್ರಹಿಸುತ್ತಾರೆ (ಶುಕ್ರವಾರ). ಕಸವನ್ನು ಸರಿಯಾಗಿ ಕಟ್ಟಿ ನಿಗದಿಪಡಿಸಿದ ಸ್ಥಳದಲ್ಲಿ ಇಟ್ಟುಬರುವುದು. ಅದು ಎರಡು ದಿನ ಮುಂಚಿತವಾಗಿ ಇಟ್ಟರೆ ಅದನ್ನು ತೆಗೆದು ಕೊಳ್ಳುವುದಿಲ್ಲ. ಆ ದಿನದಂದು ಯಾವಕಸ ಸಂಗ್ರಹಿಸುವರೋ ಅದನ್ನು ಮಾತ್ರ ಇಡತಕ್ಕದ್ದು, ಮತ್ತೆ ಎಲ್ಲವನ್ನು ಒಂದೇಚೀಲದಲ್ಲಿ ಹಾಕಿ ಇಟ್ಟರೆ ಅದನ್ನು ಅವರು ಮುಟ್ಟುವದಿಲ್ಲ. ದಿನನಿತ್ಯದ ಕಸ ಎಂದರೆ ದಿನನಿತ್ಯದ ಆಹಾರ ತ್ಯಾಜ್ಯ ಮತ್ತು ಇತರೆ ಕಸ. ಸಂಗ್ರಹಿಸಿದ ತ್ಯಾಜ್ಯವನ್ನು ಹೇಗೆ ವಿವಿದ ರೀತಿಯಲ್ಲಿ ಮರುಬಳಕೆ ಮಾಡುತ್ತಾರೆ ಎಂಬುವುದನ್ನು ಕೆಳಗಿನ ಚಿತ್ರದಲ್ಲಿ ಕಾಣಬಹುದು.


ದಿನನಿತ್ಯದ ಕಸವನ್ನು ಅವರು ರಸ ಗೊಬ್ಬರ ತಯಾರಿಸಲು ಉಪಯೋಗಿಸುತ್ತಾರೆ. ಇದಲ್ಲದೆ, ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ದಿನನಿತ್ಯದ ಕಸವನ್ನು ಹಾಗು ಇತರೆ ತ್ಯಾಜ್ಯವನ್ನು ಸುಟ್ಟು ವಿದ್ಯುತ್ತನ್ನು ಉತ್ಪಾದಿಸುತ್ತಾರೆ ಮತ್ತು ಸುಟ್ಟು ಉಳಿದಂತ ಬೂದಿಇಂದ ರಸ್ತೆ ಮಾಡಲು ಬೇಕಾದ ಮೂಲ ವಸ್ತುಗಳನ್ನು ಮತ್ತು ಇತರೆ ಮರು ಬಳಕೆ ವಸ್ತುಗಳನ್ನು ಮಾಡುತ್ತಾರೆ. ಹಾಗಾಗಿ ಇಲ್ಲಿ ಪ್ರತಿಯೊಂದು ಹಳ್ಳಿಯಿಂದ ಹಿಡಿದು ದೊಡ್ಡ ಪಟ್ಟಣದ ವರೆಗೂ ಬಹಳ ಸ್ವಚ್ಚತೆ ಕಾಣಬಹುದು. ಜನರು ನಡೆದಾಡುವಾಗ, ದಾರಿಲಿ ಏನಾದರು ಕಸ ಬಿದ್ದಿದ್ದರೆ ಅದನ್ನು ಎತ್ತಿ ಕಸದ ತೊಟ್ಟಿಗೆ ಹಾಕುತ್ತಾರೆ. ಅಷ್ಟೊಂದು ಜವಾಬ್ದಾರಿ ಈ ಜಪಾನಿಯರಲ್ಲಿ ಕಂಡುಬರುತ್ತದೆ.




ಸರಕಾರ ಯಾವದೇ ಕಾನೂನು ಜಾರಿಮಡಿದರೂ ನಮ್ಮಲ್ಲಿ ಜನರು ಸರಿಯಾಗಿ ಪಾಲಿಸುವುದಿಲ್ಲ. ಯಾಕೆಂದರೆ ನಮ್ಮ ಜನರಲ್ಲಿ ಭಾವನೆಗಳೇ ಹಾಗಿವೆ. ತಮ್ಮ ಮನೇಲಿರೋ ಕಸ ಹೋದ್ರೆ ಸಾಕು ಏನಾದ್ರು ಮಾಡ್ಕೊಳ್ಳಿ ನಮ್ಮ ಮನೆ ಒಂದು ಸ್ವಚ್ಚವಾಗಿದ್ರೆ ಅಷ್ಟೆ ಸಾಕು ಎನ್ನುವರು. ಸ್ವಚ್ಚತೆಗೆ ಪ್ರತಿಯೊಬ್ಬರ ಪಾತ್ರ ಬಹುಮುಖ್ಯವಾದುದು. ಇದರ ಜ್ಯೋತೆಗೆ ನಮ್ಮ ಸರ್ಕಾರವು ಕೂಡ ಸರಿಯಾದ ಕಸ ವಿಲೇವಾರಿ ಯೋಜನೆಗಳನ್ನು ಕೈಗೊಳ್ಳಲಿ ಮತ್ತು ಆ ಕಸದಿಂದ ರಸವನ್ನು ತೆಗೆಯುವ ಕೆಲಸ ಮಾಡಬೇಕಾಗಿದೆ.